ವಿಲಿಯಮ್ಸ್, ಸೆರೀನಾ
	1981-. ಅಮೆರಿಕದ ಪ್ರಸಿದ್ಧ ಟೆನಿಸ್ ಆಟಗಾರ್ತಿ. ಮಿಶಿಗನ್‍ನ ಸಗಿನಾವ್‍ನಲ್ಲಿ 1981 ಸೆಪ್ಟಂಬರ್ 26ರಂದು ಜನಿಸಿದಳು. ಈಕೆಗಿಂತ ಕೇವಲ 15 ತಿಂಗಳ ಮುಂಚೆ ಜನಿಸಿದ ಅಕ್ಕ ವೀನಸ್ ಕೂಡ ಟೆನಿಸ್ ಆಟಗಾರ್ತಿ. ತಂದೆ ರಿಚರ್ಡ್ ಸೆಕ್ಯೂರಿಟಿ ಏಜೆನ್ಸಿಯ ನೌಕರ; ತಾಯಿ ಒರಾಸೀನ್ ಓರ್ವ ನರ್ಸ್. ಇವರದು ಬಡಕುಟುಂಬ. ಯಾವುದೇ ಕ್ಲಬ್ ಸದಸ್ಯತ್ವ ಇವರ ಪಾಲಿಗೆ ದೊರಕಲಿಲ್ಲ. ಟೆನಿಸ್ ಆಟದ ಅಭ್ಯಾಸ ನಡೆಸಲು ಚೆಂಡುಗಳನ್ನೂ ಕೊಳ್ಳಲಾಗದ ಪರಿಸ್ಥಿತಿಯಲ್ಲಿ ತಂದೆ ಟೆನಿಸ್ ಟೀಚಿಂಗ್ ಮ್ಯಾನ್ಯುಯಲ್ ಖರೀದಿಸಿ ಅದರಲ್ಲಿದ್ದ ಸೂಚನೆಗಳಂತೆ ಮಕ್ಕಳನ್ನು ಆಡುವಂತೆ ಮಾಡಿ ದಿನಕ್ಕೆ 6 ಗಂಟೆ ಅಭ್ಯಾಸ ಮಾಡಿಸಿದ. 

	ವೀನಸ್ 9 ಮತ್ತು ಈಕೆ 8 ವರ್ಷದವರಾಗಿದ್ದಾಗ ಮೊದಲ ಟೂರ್ನಮೆಂಟ್ ಪ್ರವೇಶಿಸಿದರು. ಈ ತಂಡ ಫೈನಲ್ಸ್ ತಲುಪಿದ್ದೇ ದೊಡ್ಡ ಸಾಧನೆ. ಜನಾಂಗೀಯ ಅಸೂಯೆಯನ್ನು ಮನಗಂಡ ತಂದೆ ಇವರನ್ನು ಜೂನಿಯರ್ ವಲಯದಿಂದ ದೂರವಿರಿಸಿದ. ಇವರನ್ನು ಫ್ಲಾರಿಡ ಟೆನಿಸ್ ಅಕಾಡೆಮಿಯ ಶಿಕ್ಷಕ ರಿಕ್ ಮಚಿ ಎಂಬಾತನ ಬಳಿಗೆ ತರಬೇತಿಗೆ ಕಳಿಸಲಾಯಿತು. ಈ ಮೂಲಕ 14-15ನೆಯ ವಯಸ್ಸಿಗೇ ಇವರು ವೃತ್ತಿನಿರತ ಕ್ರೀಡಾಪಟುಗಳಾಗುವಂತಾಯಿತು. ಈಕೆಗೆ ಸೋದರಿಯಷ್ಟು ವೇಗ, ಶಕ್ತಿಗಳಿರಲಿಲ್ಲ. ಆದರೂ ಈಕೆ ಮೋನಿಕಾ ಸೆಲೆಸ್ ಮತ್ತು ಪಿಯರ್ಸ್ ಮೇಲೆ ಜಯಸಾ ಧಿಸಿದಳು. ಚಾರಿತ್ರಿಕವಾಗಿ ತುಳಿಯಲ್ಪಟ್ಟ ಕಪ್ಪುವರ್ಣದ ಇವರು ಅದುವರೆಗೆ ಬಿಳಿವ ರ್ಣದವರ ಹಿಡಿತದಲ್ಲಿದ್ದ ಈ ಕ್ರೀಡೆಯ ಮೇಲೆ ತಮ್ಮ ಹತೋಟಿ ಸಾಧಿಸಿದರು (1998). 

	ಈಕೆ ಲಿಂಡ್ಸೆ ಡೆವಾನ್‍ಪೋಟ್ರ್ಸ್, ಮೋನಿಕ ಸೆಲೆಸ್ ಮತ್ತು ಮಾರ್ಟಿನಾ ಹಿಂಗಿಸ್‍ರನ್ನು ಸೋಲಿಸಿ ಯು.ಎಸ್.ಓಪನ್ ಗೆದ್ದಳು(1999). ಸೋದರಿಯನ್ನು ಸೋಲಿಸಿ ಗ್ರ್ಯಾನ್ ಸ್ಲಾಂ ಗೆದ್ದುಕೊಂಡಳು. ಅನಂತರ ಈಕೆ ಟೆನಿಸ್ ಸಾಮ್ರಾಜ್ಞಿಯಾಗಿ ಮೆರೆದಳು. ನಾಲ್ಕೂ ಗ್ರ್ಯಾನ್ ಸ್ಲಾಂಗಳನ್ನು ಒಟ್ಟಿಗೇ ಗೆದ್ದುಕೊಂಡ ಮಹಿಳೆಯರಲ್ಲಿ 5ನೆಯವಳಾದಳು. ಈ ನಾಲ್ಕು ಜಯಗಳಲ್ಲಿ ಪ್ರತಿಯೊಂದರ ಅಂತಿಮ ಪಂದ್ಯಗಳನ್ನು ಇವಳು ಗೆದ್ದುದು ಅಕ್ಕ ವೀನಸ್‍ಳ ವಿರುದ್ಧವೇ. 

	ಅತಿಕಡಿಮೆ ರ್ಯಾಂಕಿಂಗ್ (ನಂ 304) ಹೊಂದಿದ್ದಾಗಲೇ ಅತ್ಯುಚ್ಚ 10 ಆಟಗಾರರಲ್ಲಿದ್ದ ಮೇರಿ ಪಿಯರ್ಸ್ ಮತ್ತು ಮೋನಿಕಾ ಸೆಲೆಸ್‍ರನ್ನು ಸೋಲಿಸಿದ್ದು ಇವಳ ಸಾಧನೆ. ಈಕೆಯ ಹಿಂದಿರುಗಿಸಲಾಗದಂಥ ದೂಳೆಬ್ಬಿಸುವಂಥ ಬಲಿಷ್ಠ ಸರ್ವ್‍ಗಳು, ಮಿಂಚಿನ ಪ್ಲೇಸ್‍ಮೆಂಟ್‍ಗಳು ಮತ್ತು ವಾಲಿಗಳು ಅದ್ಭುತವೆನಿಸಿವೆ. ಈಕೆ ಆಸ್ಟ್ರೇಲಿಯದ ಸಿಡ್ನಿ ಒಲಿಂಪಿಕ್ಸ್ ಡಬಲ್ಸ್ ಪಂದ್ಯಗಳಲ್ಲಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಳು (2000). ಈಕೆ ಆರು ಗ್ರ್ಯಾನ್ ಸ್ಲಾಂ ಪ್ರಶಸ್ತಿಗಳನ್ನು ಗೆದಿದ್ದಾಳೆ.	
										(ಡಿ.ಎನ್.ಎಸ್.) (ಜಿ.ಎಚ್.)

   *

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ